ಭಾರತ ಮತ್ತು ಅಮೆರಿಕ ವಿದೇಶಾಂಗ ಸಚಿವರ ಭೇಟಿ; ಸಂಬಂಧ ಗಟ್ಟಿಗೊಳಿಸಲು ಚರ್ಚೆ

No comments
ಭಾರತ ಮತ್ತು ಅಮೆರಿಕ ವಿದೇಶಾಂಗ ಸಚಿವರ ಭೇಟಿ; ಸಂಬಂಧ ಗಟ್ಟಿಗೊಳಿಸಲು ಚರ್ಚೆ

ನವದೆಹಲಿ(ಜೂನ್ 26): ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕದ ಪ್ರಧಾನ ಕಾರ್ಯದರ್ಶಿ ಮೈಕ್ ಪೋಂಪಿಯೋ ಅವರು ಇಂದು ಬುಧವಾರ ಭೇಟಿಯಾದರು. ಎರಡೂ ದೇಶಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಇವರಿಬ್ಬರು ಮಾತುಕತೆ ನಡೆಸಿದರು. ಇರಾನ್ ಮತ್ತು ರಷ್ಯಾದೊಂದಿಗಿರುವ ಭಾರತದ ವ್ಯಾವಹಾರಿಕ ಸಂಬಂಧವು ಅಮೆರಿಕವನ್ನು ಇರಿಸುಮುರುಸುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿಯಾಗಿರುವುದು ಗಮನಾರ್ಹ. ಇದೇ ಹಿನ್ನೆಲೆಯಲ್ಲೇ ಈ ಭೇಟಿಯು ಸಾಕಷ್ಟು ಕುತೂಹಲ ಮೂಡಿಸಿದೆ. ಈ ವಾರಾಂತ್ಯದಲ್ಲಿ ಜಪಾನ್​ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ ಭೇಟಿಗೆ ಪೂರ್ವಭಾವಿಯಾಗಿ ಇವತ್ತು ವಿದೇಶಾಂಗ ಸಚಿವರ ಮಾತುಕತೆ ನಡೆದಿದೆ.
ಮೈಕ್ ಪಾಂಪಿಯೋ ಅವರು ನಿನ್ನೆ ಮಂಗಳವಾರ ರಾತ್ರಿಯೇ ದೆಹಲಿಯಗೆ ಆಗಮಿಸಿದ್ದರು. ಇವತ್ತು ಬೆಳಗ್ಗೆ ಅವರು ಪ್ರಧಾನಿ ನರೇಂದ್ರ ಅವರನ್ನು ಭೇಟಿಯಾಗಿ ಕೆಲ ವಿಚಾರಗಳಲ್ಲಿ ಅಭಿಪ್ರಾಯ ಹಂಚಿಕೊಂಡರು ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಇನ್ನು, ಭಾರತ ಮತ್ತು ಅಮೆರಿಕದ ವಿದೇಶಾಂಗ ಸಚಿವರು ತಮ್ಮಿಬ್ಬರ ಭೇಟಿಯ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ವ್ಯವಹಾರ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಇರುವುದು ಸಹಜ. ಅದನ್ನು ಕಾಲಾನುಕ್ರಮದಲ್ಲಿ ಬಗೆಹರಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ವಿದೇಶೀ ಭಯೋತ್ಪಾದನೆ (ಕ್ರಾಸ್ ಬಾರ್ಡರ್ ಟೆರರಿಸಂ)ಯನ್ನು ಎರಡೂ ದೇಶಗಳು ಬಲವಾಗಿ ಖಂಡಿಸಿವೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದರು.
ಭಯೋತ್ಪಾದನೆ ವಿಚಾರದ ಜೊತೆಗೆ, ರಷ್ಯಾ ದೇಶದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸುತ್ತಿರುವುದು; ಇರಾನ್​ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದು; ಅಮೆರಿಕದ ಹೆಚ್-1ಬಿ ವೀಸಾ; ಭಾರತ ಮತ್ತು ಅಮೆರಿಕ ನಡುವಿನ ವ್ಯವಹಾರ ಬಿಕ್ಕಟ್ಟು ಇತ್ಯಾದಿ ವಿಚಾರಗಳನ್ನು ಈ ವಿದೇಶಾಂಗ ಸಚಿವರ ಭೇಟಿ ವೇಳೆ ಚರ್ಚೆ ಮಾಡಲಾಗಿದೆ. ಆದರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ, ಭೇಟಿ ನಂತರ ಮಾತನಾಡಿದ ಎಸ್. ಜೈಶಂಕರ್, ಯಾವುದೇ ನಿರ್ಧಾರ ಕೈಗೊಳ್ಳುವಾಗ ಭಾರತದ ಹಿತಾಸಕ್ತಿಯನ್ನು ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದ್ಧಾರೆ.

No comments

Post a Comment