ನವದೆಹಲಿ(ಜೂನ್.11): ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕೇಂದ್ರದಿಂದ ನೋಟಿಸ್ ನೀಡಲಾಗಿದೆ. ತಾವು 2004ರಿಂದ ದೆಹಲಿಯಲ್ಲಿ ನೆಲೆಸಿದ್ದ ಬಂಗಲೆಯನ್ನು ಸದ್ಯದಲ್ಲೇ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ಯಾರ್‍ಯಾರು? ಬಂಗಲೆ ಖಾಲಿ ಮಾಡಬೇಕೆಂದು ಪಟ್ಟಿ ತಯಾರಿಸಿರುವ ಲೋಕಸಭಾ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.
ರಾಹುಲ್ ಗಾಂಧಿಯವರು ನೆಲೆಸಿರುವ ಅಧಿಕೃತ ನಿವಾಸ ಸೇರಿದಂತೆ 12 ಸಂಸದರ ಬಂಗಲೆ ಖಾಲಿ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಎಲ್ಲರಿಗೂ ನೋಟಿಸ್ ನೀಡಲಾಗಿದ್ದು, ಖಾಲಿ ಮಾಡುವಂತೆ ಆದೇಶಿಸಲಾಗಿದೆ.
2004ರಲ್ಲಿ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದ ರಾಹುಲ್ ಗಾಂಧಿಯವರು ಇದೇ ನಂ.12 ಬಂಗಲೆಯನ್ನು ತಮ್ಮ ಅಧಿಕೃತ ನಿವಾಸ ಮಾಡಿಕೊಂಡಿದ್ದರು. ಟೈಪ್-8 ಕೆಟಗಿರಿ ಅಡಿಯಲ್ಲಿ ಬರುವ ಈ ಬಂಗಲೆ ಅತ್ಯುನ್ನತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ಇನ್ನು ಲೋಕಸಭಾ ಕಾರ್ಯದರ್ಶಿ ಹೊರಡಿಸಿರುವ ಈ ಪ್ರಕಟಣೆಯಲ್ಲಿ 12 ಬಂಗಲೆಗಳನ್ನು ಖಾಲಿ ಮಾಡಿಸುವುದರ ಜೊತೆಗೆ 517 ಬಂಗಲೆಗಳನ್ನು ಹೊಸ ಸಂಸದರಿಗೆ ಹಂಚಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ.
ಸದ್ಯ ಕೇಂದ್ರದಿಂದ ರಾಹುಲ್ ಗಾಂಧಿಯವರಿಗೆ ಈ ಸಂಬಂಧ ನೋಟಿಸ್ ಕಳಿಸಲಾಗಿದೆ. ಆದರೆ, ಇನ್ನೂ ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಸೋತು ಕೇರಳದ ವಯನಾಡ್ ಕ್ಷೇತ್ರದಿಂದ ಭರ್ಜರಿ ಗೆಲುವು ದಾಖಲಿಸಿದ ರಾಹುಲ್ಗೆ ಯಾವ ಬಂಗಲೆ ಸಿಗಲಿದೆ ಎಂಬುದು ಮಾತ್ರ ಕುತೂಹಲ ಸಂಗತಿ.

No comments
Post a Comment