ಜೇನುಕುರುಬ ಜನಾಂಗದವರ ಅಭಿವೃದ್ಧಿಗೆ ಶ್ರಮಿಸಿ: ಅನೀಸ್ ಕಣ್ಮಣಿ ಜಾಯ್

No comments

ಮಡಿಕೇರಿ:ಜಿಲ್ಲೆಯ ಮೂಲ ಜೇನುಕುರುಬ ಜನಾಂಗದವರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳಿದ್ದು, ಇವುಗಳನ್ನು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೂಲ ನಿವಾಸಿ ಜೇನು ಕುರುಬ ಜನಾಂಗದವರ ಅಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಕಾದಂಬರಿಗಳ ವಹಿಸಿ ಅವರು ಮಾತನಾಡಿದರು. ಜೇನು ಕುರುಬ ಜನಾಂಗದ ಕುಟುಂಬದವರಿಗೆ ಮನೆ ನಿರ್ಮಾಣ ಮಾಡುವುದು, ಕೃಷಿ, ಭೂ ಅಭಿವೃದ್ಧಿ ಕಾರ್ಯಕ್ರಮಗಳು, ಪಶು ಸಂಗೋಪನೆ ಇಲಾಖೆ ಮೂಲಕ ಪಶುಭಾಗ್ಯ ಯೋಜನೆಯ ಅನುಷ್ಠಾನ, ಹಸು, ಎಮ್ಮೆ, ತೋಟಗಾರಿಕೆ ಇಲಾಖೆ ಕಾರ್ಯಕ್ರಮದಡಿ ಜೇನು ಕೃಷಿ, ಆರೋಗ್ಯ ಕಾರ್ಯಕ್ರಮದಡಿ ಆರೋಗ್ಯ ಸಂಬಂಧ ಜಾಗೃತಿ ಮೂಡಿಸುವುದು, ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಉಚಿತವಾಗಿ ಕಲ್ಪಿಸುವುದು, ಹಾಡಿಗಳಿಗೆ ವಿದ್ಯುತ್ ಸಂಪರ್ಕ, ಸೋಲಾರ್ ದೀಪ ವ್ಯವಸ್ಥೆ ಮಾಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ತಲುಪಿಸಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ವಿವಿಧ ಇಲಾಖೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಜೇನುಕುರುಬ ಜನಾಂಗದವರಿಗೆ ಯಾವ ರೀತಿಯ ಸೌಲಭ್ಯಗಳನ್ನು ಕಲ್ಪಿಸಬಹುದು ಎಂಬ ಬಗ್ಗೆ ವಿವಿಧ ಇಲಾಖೆಗಳು ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್ ಅವರು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 1303 ಗುರಿಯಲ್ಲಿ 1,157 ಆಯ್ಕೆ ಮಾಡಲಾಗಿದೆ. ಇದರಲ್ಲಿ 45 ಅಡಿಪಾಯ ಪೂರ್ಣಗೊಂಡಿದೆ. 57 ಗೋಡೆ ತನಕ ಕಾಮಗಾರಿ ನಡೆದಿದೆ. 78 ಛಾವಣಿ ಹಂತ ತಲುಪಿದೆ. 586 ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 391 ಮನೆಗಳ ನಿರ್ಮಾಣ ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 29 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 23 ಪೂರ್ಣಗೊಂಡಿದೆ. 5 ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ 34 ಕಾಮಗಾರಿಗಳಲ್ಲಿ 28 ಕಾಮಗಾರಿ ಪೂರ್ಣಗೊಂಡಿದ್ದು, 8 ಕಾಮಗಾರಿ ಪ್ರಗತಿಯಲ್ಲಿದೆ. ಹಾಗೆಯೇ ಸಮುದಾಯ ಭವನ ನಿರ್ಮಾಣ ಸಂಬಂಧಿಸಿದಂತೆ 5 ಕಾಮಗಾರಿಯಲ್ಲಿ 3 ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು. ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಎಲೆಕ್ಟ್ರೀಷಿಯನ್, ಮ್ಯಾನ್ಸನ್, ಟೈಲ್ಸ್ ಅಳವಡಿಸುವುದು, ಪ್ಲಂಬರಿಂಗ್, ವಾಹನ ಚಾಲನಾ ತರಬೇತಿ, ಮರ ಗೆಲಸ, ಮೊಬೈಲ್ ರಿಪೇರಿ, ಬ್ಯೂಟಿಷೀಯನ್ ಮತ್ತಿತರವನ್ನು ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ 9.50 ಲಕ್ಷ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು. ಜೇನುಕುರುಬ ಸಮಾಜದ ಮುಖಂಡರಾದ ಜೆ.ಪಿ.ರಾಜು, ಜೆ.ಕೆ.ರಾಮು, ಇಂದಿರಾ, ಸೋಮಯ್ಯ ಅವರು ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡುವುದರ ಜೊತೆಗೆ ಸಮುದಾಯ ಅರಣ್ಯ ಹಕ್ಕು ಪತ್ರಗಳನ್ನು ನೀಡುವಂತಾಗಬೇಕು. ಬಾಳೆಗುಂಡಿ ಹಾಡಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಅವರು ಕೋರಿದರು. ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮೂಲನಿವಾಸಿ ಜೇನುಕುರುಂಬ ಜನಾಂಗದವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಹಲವು ಸಲಹೆ ನೀಡಿದರು. ಮನೆಗಳ ಹಾಗೂ ವಿವಿಧ ಮೂಲಭೂತ ಸೌಕರ್ಯ ಕಾಮಗಾರಿಗಳ ಪ್ರಗತಿ ಪರಿಶೀಲನೆ, 2011-12 ಮತ್ತು 2012-13 ನೇ ಸಾಲಿನಲ್ಲಿ ಅನುಷ್ಠಾನಗೊಳ್ಳದಿರುವ ಕಾರ್ಯಕ್ರಮಗಳ ಬದಲಿಗೆ ಹೊಸ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಬಗ್ಗೆ, ಕೃಷಿ ಕಾರ್ಯಕ್ರಮದಡಿ ಬಿಡುಗಡೆಯಾಗಿರುವ ರೂ. 25 ಲಕ್ಷ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ, ಭೂ ಅಭಿವೃದ್ಧಿ ಕಾರ್ಯಕ್ರಮಕ್ಕೆ ರೂ. 42 ಲಕ್ಷ ಬಿಡುಗಡೆಯಾಗಿದ್ದು, ಕೃಷಿ ಇಲಾಖೆಯಲ್ಲಿನ ಮಾರ್ಗ ಸೂಚಿಗಳನ್ವಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ, ಪಶು ಸಂಗೋಪನೆ ಕಾರ್ಯಕ್ರಮದಡಿ ಬಿಡುಗಡೆಯಾಗಿರುವ ರೂ. 80 ಲಕ್ಷ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುವ ಬಗ್ಗೆ, ಇಂಟಿಗ್ರೇಟೆಡ್ ಡೈರಿ ಡೆವಲಪ್‍ಮೆಂಟ್ ಕಾರ್ಯಕ್ರಮದಡಿ ರೂ. 26.25 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಪಶು ಭಾಗ್ಯ ಯೋಜನೆಯ ಮಾರ್ಗಸೂಚಿಯನ್ವಯ 35 ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಿ ರೂ. 75 ಸಾವಿರಗಳನ್ನು ಇಲಾಖೆಯಿಂದ ಮತ್ತು ರೂ. 25 ಸಾವಿರ ಮೊತ್ತ ಫಲಾನುಭವಿಗಳಿಂದ ಪಡೆದು ಒಟ್ಟು ರೂ. 1 ಲಕ್ಷ ಮೊತ್ತಕ್ಕೆ 2 ಮಿಶ್ರತಳಿ ಹಸು/ ಎಮ್ಮೆಗಳನ್ನು ಖರೀದಿಸಿ ಹಂಚಿಕೆ ಮಾಡುವ ಬಗ್ಗೆ, ತೋಟಗಾರಿಕಾ ಕಾರ್ಯಕ್ರಮದಡಿ ಬಿಡುಗಡೆಯಾಗಿರುವ ರೂ. 45 ಲಕ್ಷಗಳ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ, ಆರೋಗ್ಯ ಕಾರ್ಯಕ್ರಮದಡಿ ರೂ. 5 ಲಕ್ಷ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಐಟಿಡಿಪಿ ಅಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸೆಸ್ಕ್ ಎಂಜಿನಿಯರ್ ಸೋಮಶೇಖರ್, ಜಿ.ಪಂ. ಎಂಜಿನಿಯರ್ ಶ್ರೀಕಂಠಯ್ಯ, ಇದ್ದರು.

No comments

Post a Comment