ಮಡಿಕೇರಿ :ಜಿಲ್ಲಾಡಳಿತದ ಜೊತೆ ಸಮುದಾಯ ಸಹಭಾಗಿತ್ವ ಕೈಜೋಡಿಸಿದ್ದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದfರ್ಭದಲ್ಲಿ ಎದುರಿಸಲು ಸಾಧ್ಯ ಎಂದು ಪುನರ್ ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರು ಹೇಳಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಬಗ್ಗೆ ಮಂಗಳವಾರ ನಡೆದ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಉಂಟಾಗಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಆದ್ದರಿಂದ ಪ್ರಕೃತಿ ವಿಕೋಪ ಎದುರಿಸುವಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳು ಕೈಜೋಡಿಸುವಂತಾಗಬೇಕು ಎಂದು ಅವರು ತಿಳಿಸಿದರು. ಪ್ರಸಕ್ತ ಬಾರಿಯ ವಿಕೋಪ ಮುನ್ನೆಚರಿಕೆಯ ನಿರ್ವಹಣೆಗೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದೆ. ಜಿಲ್ಲಾಡಳಿತದೊಂದಿಗೆ ಹಲವಾರು ಸರ್ಕಾರೇತರ ಸಂಘ ಸಂಸ್ಥೆಗಳು, ಎನ್‍ಡಿಆರ್‍ಎಫ್ ತಂಡಗಳು, ವಿಕೋಪ ನಿರ್ವಹಣಾ ತಂಡಗಳು ರಕ್ಷಣೆಗೆ ಜಿಲ್ಲೆಗೆ ಆಗಮಿಸಿದ್ದು, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಪ್ರಕೃತಿ ನಿರ್ವಹಣೆಗೆ ಕೈ ಜೋಡಿಸುವಲ್ಲಿ ಪ್ರಕೃತಿ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಲು
ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. . ಕಾಲೇಜಿನ ಪ್ರಾಂಶುಪಾಲರಾದ ಡಾ.ತಿಮ್ಮಯ್ಯ ಅವರು ಮಾತನಾಡಿ ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಹಲವು ಸಮಸ್ಯೆಗಳು ಉಂಟಾದವು. ಆದ್ದರಿಂದ ಈ ಬಾರಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಎನ್‍ಎಸ್‍ಎಸ್.ವಿದ್ಯಾರ್ಥಿಗಳು ಅಗತ್ಯ ಸಹಕಾರ ನೀಡುವಂತೆ ಸಲಹೆ ಮಾಡಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಾಲೋಚಕರಾದ ಪ್ರಭಾತ್ ಕಲ್ಕೂರ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ವಿಪತ್ತು ಸಂಭವಿಸಿದಲ್ಲಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು, ತುರ್ತು ಪರಿಹಾರ ಸ್ಪಂದನೆ ಹಾಗೂ ವಿಪತ್ತು ಹಾನಿ ಕಡಿಮೆ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನಿಡಿದರು. ರಾಷ್ಟ್ರೀಯ ಸೇವಾ ಯೋಜನಾ ವಿಭಾಗದ ಉಪನ್ಯಾಸಕರಾದ ಗೀತಾಂಜಲಿ ಇತರರು ಇದ್ದರು.


No comments
Post a Comment