ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಪ್ರಜೆಯಾಗಿ ರೂಪಿಸಿ: ನೂರುನ್ನಿಸ 


ಮಡಿಕೇರಿ-ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವಂತಾಗಬೇಕು. ಇದರಿಂದ ಉತ್ತಮ ಪ್ರಜೆಯನ್ನಾಗಿ ರೂಪಿಸಬಹುದು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಅವರು ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಪೋಲಿಸ್, ನಗರಸಭೆ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ವಕೀಲರ ಸಂಘ, ಕೊಡಗು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸರ್ಕಾರೇತರ ವಿವಿಧ ಸಂಘ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಎನ್ನುವುದು ಒಂದು ಪ್ರಮುಖ ಅಸ್ತ್ರವಾಗಿದೆ. ಎಲ್ಲಾ ಮಕ್ಕಳು ಶಿಕ್ಷಣವಂತರಾದರೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಈ ದಿಕ್ಕಿನಲ್ಲಿ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಹಲವು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ ಎಂದರು. ಯಾವುದೇ ಕಾರಣಕ್ಕೂ ದುಡಿಮೆಗೆ ದೂಡಬಾರದು. ಮಕ್ಕಳನ್ನು ದುಡಿಮೆಗೆ ದೂಡುವುದು ಮತ್ತು ಒತ್ತಡ ಹೇರುವುದು ಸರಿಯಲ್ಲ. ಮಕ್ಕಳ ಕನಸನ್ನು ಪೋಷಿಸಬೇಕು ಎಂದು ಅವರು ತಿಳಿಸಿದರು. ಮಕ್ಕಳು ವಿದ್ಯಾಭ್ಯಾಸ ಸಂದರ್ಭದಲ್ಲಿ ಅನುತ್ತೀರ್ಣರಾದಾಗ ದುಡಿಮೆಗೆ ತಳ್ಳುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಮಕ್ಕಳನ್ನು ಓದಿನ ಕಡೆ ಗಮನಹರಿಸಲು ಉತ್ತೇಜನ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಹೇಳಿದರು. ವಿಶ್ವದಲ್ಲಿ 152 ಮಿಲಿಯನ್ ಮಕ್ಕಳು ಹಾಗೂ ದೇಶದಲ್ಲಿ 10 ಮಿಲಿಯನ್‍ಗಿಂತ ಹೆಚ್ಚು ಮಕ್ಕಳು ದುಡಿಯುತ್ತಿದ್ದಾರೆ. ಇದು ಮಕ್ಕಳ ಭವಿಷ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು. ಬಾಲ ಕಾರ್ಮಿಕರು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವಂತಾಗಬೇಕು. ಮಕ್ಕಳನ್ನು ಪಾಠ ಪ್ರವಚನದ ಜೊತೆಗೆ ಕ್ರೀಡಾ, ಸಂಗೀತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ಮಾಡಿದರು. ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಮಕ್ಕಳು ಕನಸುಗಳಿಲ್ಲದೆ ಬದುಕುತ್ತಿದ್ದಾರೆ. ಅವರಿಗೆ ಕನಸುಗಳನ್ನು ಕಟ್ಟಿಕೊಳ್ಳಲು ಅವಕಾಶಗಳೇ ಇಲ್ಲವಾಗಿದೆ. ಈ ಮಕ್ಕಳ ಬಗ್ಗೆ ಪೋಷಕರು ಸಹ ಅಷ್ಟಾಗಿ ಗಮನಹರಿಸದೆ ಇರುವುದು ಮಕ್ಕಳು ಕನಸುಗಳೇ ಇಲ್ಲದೆ ಜೀವಿಸುವ ಪರಿಸ್ಥಿತಿಯಾಗಿದೆ ಎಂದರು. ಇನ್ನು ನಗರ ಪ್ರದೇಶದಲ್ಲಿ ಇದಕ್ಕೆ ವಿರುದ್ಧವಾಗಿದೆ. ಅಂದರೆ ಅಲ್ಲಿ ಮಕ್ಕಳಿಗಿಂತ ಪೋಷಕರೇ ಕನಸುಗಳನ್ನು ಕಟ್ಟಿಕೊಂಡು ತಮ್ಮ ಮಕ್ಕಳು ಇಂತಹ ಶಾಲೆಯಲ್ಲಿ ಓದಬೇಕು. ಇದೇ ಹುದ್ದೆಗೆ ಹೋಗಬೇಕು. ಇದನ್ನೇ ಮಾಡಬೇಕು ಎಂದು ಅದನ್ನು ಸಾಧಿಸುವಂತೆ ಮಗುವಿನ ಮೇಲೆ ಒತ್ತಡವನ್ನು ಹೇರುತ್ತಿರುತ್ತಾರೆ. ಇದರಿಂದ ಮಗುವಿಗೆ ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇದೆ ಎನ್ನುವುದನ್ನೇ ಮರೆತಂತೆ ಕಾಣುತ್ತದೆ ಎಂದು ಅವರು ತಿಳಿಸಿದರು. ಸತ್ಯವಾಗಿ, ಪ್ರಮಾಣಿಕವಾಗಿ, ಆತ್ಮಸಾಕ್ಷಿಯಾಗಿ, ಪ್ರಮಾಣ ಮಾಡುವದೇನೆಂದರೆ, ನನ್ನ ಮನೆಯಲ್ಲಿ ಅಥವಾ ನಾನು ವಾಸಿಸುವ ಸಮುದಾಯದಲ್ಲಿ ಅಥವಾ ನಾನು ಕೆಲಸ ಮಾಡುವ ಸ್ಥಳದಲ್ಲಿ ಹಾಗೂ ಸ್ಥಳದ ಸುತ್ತಮುತ್ತ 18 ವರ್ಷದೊಳಗಿನ ಮಕ್ಕಳ ದುಡಿಮೆ ಮತ್ತು ಬಾಲಕಾರ್ಮಿಕತೆ ಕಂಡು ಬಂದಲ್ಲಿ, ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧಿಸಿ ಸಂಪೂರ್ಣವಾಗಿ ತಡೆಗಟ್ಟುತ್ತೇನೆ, 18 ವರ್ಷದೊಳಗಿನ, ಶಾಲೆಯಿಂದ ಹೊರಗುಳಿದ ಯಾವುದೇ ಮಗು ಕಂಡುಬಂದರೆ ಅವರ ಪೋಷಕರಿಗೆ ತಿಳುವಳಿಕೆ ಹೇಳಿ, ಆ ಮಗುವನ್ನು ಶಾಲೆಗೆ ಸೇರಿಸಿ ಈ ದೇಶದ ಸಮೃದ್ಧಿ ಹಾಗೂ ಏಳಿಗೆಗೆ ಪ್ರಯತ್ನಿಸುತ್ತೇನೆಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವಾದ ಇಂದು ಪ್ರಮಾಣ ಮಾಡುತ್ತೇನೆ. ಇದಲ್ಲದೆ ಬಾಲಕಾರ್ಮಿಕರನ್ನು ತೊಡಗಿಸಿಕೊಂಡು ತಯಾರಿಸಿದ ಯಾವುದೇ ವಸ್ತುವನ್ನು ಉಪಯೋಗಿಸುವುದಿಲ್ಲ. ಹಾಗೂ ಬಾಲಕಾರ್ಮಿಕರ ಸೇವೆಯನ್ನು ಪಡೆಯುವುದಿಲ್ಲ ಹಾಗೂ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಕ್ರಮವನ್ನು ತೆಗೆದುಕೊಳ್ಳುತ್ತೇನೆಂದು ಈ ದಿನದಂದು ಪ್ರಮಾಣ ಮಾಡುತ್ತೇನೆ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಬೋಧಿಸಿದರು.