ಜಮ್ಶೆಡ್ಪುರ (ಜೂ. 24): ಕಳ್ಳತನ ಮಾಡಿದ್ದಾನೆಂಬ ಅನುಮಾನದಿಂದ ಮುಸ್ಲಿಂ ಯುವಕನೊಬ್ಬನ ಮೇಲೆ ಜನರ ಗುಂಪು ದಾಳಿ ನಡೆಸಿ ಮನಬಂದಂತೆ ಥಳಿಸಿ ಕೊಂದಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜೂನ್ 18ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ಜನರಿಂದ ಥಳಿಸಿಕೊಂಡ ಯುವಕನನ್ನು 24 ವರ್ಷದ ತಬ್ರೇಜ್ ಹನ್ಸಾರಿ ಎಂದು ಗುರುತಿಸಲಾಗಿದೆ. ಹೊಡೆಯುತ್ತಿರುವ ಜನರು ಆತನಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸುವುದು ವಿಡಿಯೋದಲ್ಲಿ ದಾಖಲಾಗಿದೆ.
ಸುಮಾರು 18 ಗಂಟೆಗಳ ಕಾಲ ಮರಕ್ಕೆ ಕಟ್ಟಿ ಹಾಕಿ ಆತನನ್ನು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜೂನ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಊರಿನವರ ಮೋಟಾರ್ ಬೈಕ್ ಕದ್ದಿದ್ದಾನೆ ಎಂದು ಆರೋಪಿಸಿ ಈ ಯುವಕನಿಗೆ ಮಾರಣಾಂತಿಕವಾಗಿ ಥಳಿಸಲಾಗಿದೆ. ಹೊಡೆತದಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಯುವಕನಿಗೆ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಹೇಳುವಂತೆ ಜನರು ಒತ್ತಾಯಿಸಿದ್ದಾರೆ.
ಹೊಡೆದ ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆತನ ಸಂಬಂಧಿಕರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ಸೇರಿಸಿರುವ ಬಗ್ಗೆ ಪೊಲೀಸರು ನಮಗೆ ಯಾವ ಮಾಹಿತಿಯನ್ನೂ ನೀಡಿರಲಿಲ್ಲ. ಜೈಲಿನಲ್ಲಿದ್ದ ಮಗನನ್ನು ನೋಡಲು ಅವಕಾಶವನ್ನೂ ನೀಡಲಿಲ್ಲ. ಆತನಿಗೆ ಹಿಂಸೆ ಕೊಟ್ಟ ಜನರು ಮತ್ತು ಪೊಲೀಸರೆಲ್ಲ ಜೈಲಿಗೆ ಹೋಗಬೇಕು ಎಂದು ಹನ್ಸಾರಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಬುಲಂದ್ಶೆಹರ್ನಲ್ಲಿ ಗೋವುಗಳ ಹತ್ಯೆ ಆರೋಪದಲ್ಲಿ ಇದೇ ರೀತಿ ಗಲಾಟೆಯೆದ್ದು ಪೊಲೀಸ್ ಅಧಿಕಾರಿ ಸುಭೋದ್ ಸಿಂಗ್ ಮತ್ತು ಯುವಕ ಸುಮಿತ್ ಕುಮಾರ್ಗೆ ಥಳಿಸಿ ಹತ್ಯೆ ಮಾಡಲಾಗಿತ್ತು. ಇಂತಹ ಘಟನೆಗಳು ಪುನರಾವರ್ತಿತವಾಗುತ್ತಿದ್ದು, ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಟ್ವಿಟ್ಟರ್ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

No comments
Post a Comment