ಶೇ.50ರಷ್ಟು ಮತಚೀಟಿಗಳ ತಾಳೆಗೆ ಆಗ್ರಹಿಸಿ ವಿಪಕ್ಷಗಳು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಹೊಸದಿಲ್ಲಿ, ಮೇ 7: ಲೋಕಸಭಾ ಚುನಾವಣೆಯ ಮತ ಎಣಿಕೆಯ ವೇಳೆ ಇವಿಎಂ ಮತಗಳೊಂದಿಗೆ ಶೇ.50ರಷ್ಟು ವಿವಿಪ್ಯಾಟ್‌ಗಳನ್ನು ತಾಳೆ ಮಾಡಬೇಕೆಂದು ಆಗ್ರಹಿಸಿ 21 ವಿಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ವಿಪಕ್ಷಗಳ ನಿಯೋಗ ಶೇ.50ರಷ್ಟು ವಿವಿಪ್ಯಾಟ್ ಚೀಟಿಗಳ ತಾಳೆ ನಡೆಸಬೇಕೆಂದು ಆಗ್ರಹಿಸಿತ್ತು.
ಈಗಾಗಲೇ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇದೇ ವಿಚಾರದ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ವಿಪಕ್ಷಗಳ ಪರವಾಗಿ ಕಾಂಗ್ರೆಸ್‌ನ ಹಿರಿಯ ನಾಯಕ, ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದ್ದರು. ಇದೀಗ ವಿಪಕ್ಷಗಳು ಸುಪ್ರೀಂಕೋರ್ಟಿನ ತೀರ್ಪನ್ನು ಒಪ್ಪಿಕೊಂಡಿವೆ.
ಈ ಹಿಂದೆ ಎ.8 ರಂದು ಇವಿಎಂ ಮತಗಳ ಜೊತೆಗೆ ವಿವಿಪ್ಯಾಟ್ ತಾಳೆ ಮಾಡಬೇಕೆಂದು ಆಗ್ರಹಿಸಿ ವಿಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಲೋಕಸಭಾ ಕ್ಷೇತ್ರದ ಪ್ರತಿ ಅಸೆಂಬ್ಲಿ ವಿಭಾಗದ ಆಯ್ದ ಐದು ವಿವಿಪ್ಯಾಟ್ ಗಳನ್ನು ತಾಳೆ ಹಾಕಬೇಕೆಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ಐದರ ಬದಲಿಗೆ ಶೇ.50ರಷ್ಟು ವಿವಿಪ್ಯಾಟ್ ಗಳನ್ನು ತಾಳೆಹಾಕಬೇಕೆಂದು ವಿಪಕ್ಷಗಳು ಮತ್ತೊಮ್ಮೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. ಇಂದು ಆ ಮನವಿಯನ್ನು ತಿರಸ್ಕ್ಕ್ಕರಿಸಿದ ನ್ಯಾಯಾಲಯ ತನ್ನ ಮೊದಲಿನ ಆದೇಶವನ್ನು ಮಾರ್ಪಡಿಸಲು ಸಾಧ್ಯವಿಲ್ಲ ಎಂದಿದೆ.

No comments
Post a Comment