ಹಳ್ಳಿಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ : ಸಚಿವ ಸಾ.ರಾ.ಮಹೇಶ್ ಸೂಚನೆ

No comments

 ಮಡಿಕೇರಿ ಮೇ,೧೧ :-ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಉಪ ಸಮಿತಿಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ತಮಗೆ ವಹಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿ ಸಂಬಂಧಿಸಿದಂತೆ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಜಿಲ್ಲೆಯ ಯಾವುದೇ ಕಡೆಗಳಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಸದ್ಯದಲ್ಲಿ ಮುಂಗಾರು ಆರಂಭವಾಗುವುದರಿಂದ ಯಾರೂ ಸಹ ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು. ತುರ್ತು ಸಂದರ್ಭದಲ್ಲಿ ಮಾತ್ರ ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಹೊರಡಬೇಕು ಎಂದರು. ’ ಅಧಿಕಾರಿಗಳು ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಹೊಟ್ಟೆ ಉರಿಸುವ ಕೆಲಸ ಮಾಡಬಾರದು. ಸಾರ್ವಜನಿಕರನ್ನು ನೋಯಿಸುವುದು, ತೊಂದರೆ ನೀಡುವುದು ಕೇಳಿ ಬಂದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಎಚ್ಚರಿಸಿದರು.

No comments

Post a Comment