ರಾಷ್ಟ್ರೀಯ
ಲೋಕಸಭಾ ಚುನಾವಣೆ: 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ಆರಂಭ
ಹೊಸದಿಲ್ಲಿ, ಮೇ 12: ಏಳು ಹಂತಗಳ ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ರವಿವಾರ ಬೆಳಗ್ಗೆ ಆರಂಭವಾಗಿದ್ದು, ಏಳು ರಾಜ್ಯಗಳ 59 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಎರಡನೇ ಬಾರಿ ಅಧಿಕಾರದ ಸೂತ್ರ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿ ಪಾಲಿಗೆ ಈ ಹಂತ ಅಗ್ನಿಪರೀಕ್ಷೆ ಎನಿಸಿಕೊಂಡಿದ್ದು, 2014ರ ಚುನಾವಣೆಯಲ್ಲಿ ಬಿಜೆಪಿ 59 ಕ್ಷೇತ್ರಗಳ ಪೈಕಿ 46ನ್ನು ಗೆದ್ದುಕೊಂಡಿತ್ತು. ಉತ್ತರ ಪ್ರದೇಶದಲ್ಲಿ ಇಂದು ಮತದಾನ ನಡೆಯುತ್ತಿರುವ 14 ಕ್ಷೇತ್ರಗಳ ಪೈಕಿ 13, ಹರ್ಯಾಣದ 10 ಕ್ಷೇತ್ರಗಳ ಪೈಕಿ ಏಳು, ಮಧ್ಯಪ್ರದೇಶದ ಎಂಟು ಸ್ಥಾನಗಳ ಪೈಕಿ ಏಳು, ಬಿಹಾರದ ಎಲ್ಲ ಎಂಟು, ದೆಹಲಿಯ 7 ಹಾಗೂ ಜಾರ್ಖಂಡ್‌ನ ಎಲ್ಲ ನಾಲ್ಕು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿತ್ತು.
ದೆಹಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಭೋಪಾಲ್ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಠಾಕೂರ್ ಮುಂಜಾನೆಯೇ ಮತ ಚಲಾಯಿಸಿದರು.
ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್, ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾ ಸೇರಿದಂತೆ 979 ಮಂದಿಯ ಭವಿಷ್ಯ ನಿರ್ಧಾರವಾಗಲಿದೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದೆ.
ಇಬ್ಬರು ಕ್ರೀಡಾಪಟುಗಳು ಕಣದಲ್ಲಿದ್ದು, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಪೂರ್ವ ದೆಹಲಿ ಹಾಗೂ ವೃತ್ತಿಪರ ಬಾಕ್ಸರ್ ವಿಜೇಂದ್ರ ಸಿಂಗ್ ದಕ್ಷಿಣ ದೆಹಲಿ ಕ್ಷೇತ್ರದಲ್ಲಿ ಕ್ರಮವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸೆಣೆಸುತ್ತಿದ್ದಾರೆ.
No comments
Post a Comment