ಗ್ರಾಮ ಪಂಚಾಯಿತಿಗಳಲ್ಲಿ ಉಪ ಚುನಾವಣೆ : ವೇಳಾಪಟ್ಟಿ ಪ್ರಕಟ
ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಸಂಪಾಜೆ, ಮದೆ ಮತ್ತು ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ, ಹಾತೂರು ಹಾಗೂ ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ, ದುಂಡಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೇ, ೧೩ ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಮೇ, ೧೬ ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಮೇ, ೧೭ ರದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ, ೨೦ ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ, ೨೯ ರಂದು ಮತದಾನದ ಅವಶ್ಯವಿದ್ದರೆ ಮತದಾನವು ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ. ಮೇ, ೩೦ ರಂದು ಮರು ಮತದಾನದ ಅವಶ್ಯವಿದ್ದರೆ ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ. ಮೇ, ೩೧ ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೩೦೮ ಸಿ ಪ್ರಕಾರ ಚುನಾವಣಾ ಮಾದರಿ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೇ, ೧೩ ರಿಂದ ಮೇ, ೩೧ ರವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೇ ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾ.ಪಂ.ಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ, ನಾಮಪತ್ರ ಹಿಂತೆಗೆತ ಮತ್ತಿತರ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿದ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದ, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.
ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾ,ಪಂ. ಸಂಪಾಜೆ-೨ ಕ್ಷೇತ್ರದಲ್ಲಿ (ಸಾಮಾನ್ಯ), ಮದೆ ಬೆಟ್ಟತ್ತೂರು-೨(ಸಾಮಾನ್ಯ). ಸೋಮವಾರಪೇಟೆ ತಾಲ್ಲೂಕಿನ ದುಂಡಳ್ಳಿ ಗ್ರಾ.ಪಂ. ಮಾದ್ರೆ (ಹಿಂದುಳಿದ ವರ್ಗ) (ಅ), ಕೂಡಿಗೆ ಕ್ಷೇತ್ರದಲ್ಲಿ ಕೂಡಿಗೆ-೧(ಪರಿಶಿಷ್ಟ ಜಾತಿ), ವಿರಾಜಪೇಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಣ್ಣಂಗಾಲ ಕ್ಷೇತ್ರದಲ್ಲಿ ಹಚ್ಚಿನಾಡು(ಪರಿಶಿಷ್ಟ ಜಾತಿ(ಮಹಿಳೆ), ಹಾತೂರು ಗ್ರಾ.ಪಂ. ಕೊಳತ್ತೊಡು ಬೈಗೋಡು ಕ್ಷೇತ್ರದಲ್ಲಿ (ಪರಿಶಿಷ್ಟ ಪಂಗಡ)
ಗ್ರಾ.ಪಂ.ಗಳ ಉಪ ಚುನಾವಣೆ ಸಂಬಂಧ ಚುನಾವಣಾಧಿಕಾರಿಗಳ ಮತ್ತು ಸಹಾಯಕ ಚುನಾವಣಾಧಿಕಾರಿಗಳ ವಿವರ ಇಂತಿದೆ.
ಮಡಿಕೇರಿ ತಾಲ್ಲೂಕು ಸಂಪಾಜೆ ಗ್ರಾ.ಪಂ. ವ್ಯಾಪ್ತಿಗೆ ಜಿಲ್ಲಾ ಸಂಖ್ಯಾ ಮತ್ತು ಸಂಗ್ರಹಣಾಧಿಕಾರಿಗಳ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ಟಿ.ವೆಂಕಟೇಶ್, ಸಂಪಾಜೆ ವಲಯದ ವಲಯ ಅರಣ್ಯಾಧಿಕಾರಿಗಳ ಕಚೇರಿಯ ರತ್ನಕರ್ ಪಿ.ಕೆ.,
ಮದೆ ಗ್ರಾ.ಪಂ. ವ್ಯಾಪ್ತಿಗೆ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸಿದ್ದರಾಜು, ಕ್ಷೇತ್ರ ಶಿPಣಾಧಿಕಾರಿಗಳ ಕಚೇರಿಯ ಪ್ರ.ದ.ಸ. ನಂದೀಶ್ ಕೆ.ಎನ್.,
ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ವಿರಾಜಪೇಟೆ ತಾಲ್ಲೂಕು ದೇವಣಗೇರಿ ಬೈರನಾಡು, ಚೆಂಬೆ ಬೆಳ್ಳೂರು ಪ್ರೌಢಶಾಲೆಯ ಲೋಕೇಶ್ ಎಚ್.ಡಿ., ವಿರಾಜಪೇಟೆ ಎಲಿಯಾಂಗಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ನಟರಾಜು ಎಸ್.ಎಲ್., ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಂತೋಣಿ ಅಲ್ವಾರಿಸ್, ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಕಿರಣ್.
ಸೋಮವಾರಪೇಟೆ ತಾಲ್ಲೂಕಿನ ದುಂಡಳ್ಳಿ ಗ್ರಾ.ಪಂ.ಗೆ ಸೋಮವಾರಪೇಟೆ ತಾ.ಪಂ.ತಾಲ್ಲೂಕು ಯೋಜನಾಧಿಕಾರಿ ಡಿ.ನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಪ್ರದಸ ಲೋಕೇಶ್, ಕೂಡಿಗೆ ಗ್ರಾ.ಪಂ.ಕ್ಷೇತ್ರಕ್ಕೆ ಸೋಮವಾರಪೇಟೆ ಸಹಾಯಕ ತೋಟಗಾರಿಕೆ ಅಧಿಕಾರಿ ಎಚ್.ಪಿ.ಗಣೇಶ್, ಸೋಮವಾರಪೇಟೆ ಕ್ಷೇತ್ರ ಶಿPಣಾಧಿಕಾರಿಗಳ ಕಚೇರಿಯ ಪ್ರ.ದ.ಸ. ರಾಜೇಶ್ ಎಚ್.ಪಿ.
ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಕಚೇರಿಯಲ್ಲಿ ಮೇ, ೧೩ ರಿಂದ ಮೇ, ೧೬ ರವರೆಗೆ ಚುನಾವಣಾಧಿಕಾರಿಗಳಿಗೆ, ಸಹಾಯಕ ಚುನಾವಣಾಧಿಕಾರಿಗಳಿಗೆ ನಾಮಪತ್ರಗಳನ್ನು ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯೊಳಗೆ ಸಲ್ಲಿಸಬಹುದು. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾಮ ಪಂಚಾಯಿತಿಗಳ ಮತಪತ್ರದಲ್ಲಿ ನೋಟಾ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
No comments
Post a Comment