ಫೋನಿ ಚಂಡಮಾರುತ: ತತ್ತರಿಸಿದ ಒಡಿಶಾ

No comments

ಒಡಿಶಾದಲ್ಲಿ ಫೋನಿ ಅಬ್ಬರ ಜೋರಾಗಿದೆ. ಕರಾವಳಿ ತೀರ ಸೇರಿದಂತೆ ಪುರಿಯ ಸುತ್ತ ಮುತ್ತಲಿನಲ್ಲಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸಾವಿರಾರು ಮರಗಳು ಸೇರಿದಂತೆ, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಒಡಿಶಾದ ರಾಜಧಾನಿ ಭುವನೇಶ್ವರ ಸೇರಿದಂತೆ ಕರಾವಳಿ ತೀರದ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಒಡಿಶಾ ಮಾತ್ರವಲ್ಲದೆ ಆಂಧ್ರ ಹಾಗೂ ಪಶ್ಚಿಮ ಬಂಗಾಳ ಕರಾವಳಿ ತೀರದಲ್ಲಿಯೂ ಸಾಕಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದ್ದು, ಅನಾಹುತ ತಪ್ಪಿಸಲು ವಿಪತ್ತು ನಿರ್ವಹಣಾ ಪಡೆಗಳು, ಸೇನೆ, ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಹಾನಿಯಾಗಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್‌) ಹಾಗೂ ಒಡಿಶಾ ಪೊಲೀಸ್‌ ಇಲಾಖೆ ಆ ಸ್ಥಳದ ಚಿತ್ರಣ ಕಟ್ಟಿಕೊಡವು ಸರಣಿ ಟ್ವೀಟ್‌ಗಳನ್ನು ಪ್ರಕಟಿಸಿವೆ.'ಒಡಿಶಾದ ಕಟಕ್‌ ನಗರಕ್ಕೆ ಚಂಡಮಾರುತ ಅಪ್ಪಳಿಸಿದೆ. ರಸ್ತೆ ಬದಿಗಳಲ್ಲಿದ್ದ ಹಲವು ಮರಗಳು ಧರೆಗುರುಳಿವೆ. ಒಡಿಶಾ ಡಿಜಿಪಿ ನಿರ್ದೇಶನದ ಮೇರೆಗೆ, ಕಟಕ್‌ ಡಿಸಿಪಿ ಹಾಗೂ ಒರಿಸ್ಸಾ ವಿಪತ್ತು ನಿರ್ವಹಣೆ ಕ್ಷಿಪ್ರ ಕಾರ್ಯಪಡೆಯ ಮರಗಳ ತೆರವು ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ' ಎಂದು ಒಡಿಶಾ ಪೊಲೀಸ್‌ ಟ್ವೀಟ್‌ ಮಾಡಿದೆ.
ಹವಾಮಾನ ಇಲಾಖೆ ಮೂಲಗಳು ತಿಳಿಸಿರುವಂತೆ ಫೊನಿ ಚಂಡಮಾರುತ ಇಂದು ಬೆಳಗ್ಗೆ 9.30ರ ಸುಮಾರಿಗೆ ಪುರಿ ಸಮೀಪದ ಕರಾವಳಿ ತೀರವನ್ನು ಪ್ರವೇಶಿಸಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಒಡಿಶಾ ರಾಜಧಾನಿ ಭುವನೇಶ್ವರದ ಅಂತಾರಾಷ್ಟ್ರ್ಯೀ ವಿಮಾನ ನಿಲ್ದಾಣದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಎಲ್ಲ ವಿಮಾನಗಳ ಹಾರಾಟ ಬಂದ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಒಡಿಶಾದ 15 ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಇಲ್ಲಿಯವರೆಗೂ 8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

No comments

Post a Comment