ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ ಸಚಿವ ಜಿ ಟಿ ದೇವೇಗೌಡ!


ಬೆಳಗಾವಿ: ನರೇಂದ್ರ ಮೋದಿ ನಿಸ್ವಾರ್ಥಿ ಹಾಗೂ ದೇಶ ಪ್ರೇಮಿ ಆಗಿದ್ದಾರೆ. ಈ‌ ಕಾರಣದಿಂದಲೇ‌ ಅವರಿಗೆ ಎರಡನೇ ‌ಬಾರಿಗೆ ಪ್ರಧಾನಿ ಆಗುವ ಯೋಗ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.‌ ದೇವೇಗೌಡ ಹೇಳಿದ್ದಾರೆ.

ನಗರದ ವಿಟಿಯು ಆವರಣದಲ್ಲಿ ‌ನಡೆದ ಆರ್​ಸಿಯು 7ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ದೇಶ‌ದ ಬಗ್ಗೆ ಸಾಕಷ್ಟು ‌ಗೌರವ, ಅಭಿಮಾನ ಇದೆ. ಯಾವಾಗಲೂ ದೇಶದ ಬಗ್ಗೆಯೇ ಚಿಂತಿಸುತ್ತಾರೆ. ನಿಸ್ವಾರ್ಥ ಭಾವದಿಂದ ಅವರು ದೇಶ ಸೇವೆ ಮಾಡುತ್ತಿದ್ದಾರೆ. ತಾನು ಕೂಡ ಓರ್ವ ಸಂಸದ ಎನ್ನುವಷ್ಟರ ಮಟ್ಟಿಗೆ ಅವರಿಗೆ ಸರಳತೆ ಇದೆ. ದೇಶಕ್ಕಾಗಿ ತಮ್ಮ ಜೀವನ ಎಂಬ ಅವರ ಹೇಳಿಕೆ ನನಗೆ ಇಷ್ಟವಾಗಿದೆ ಎಂದು ಹೊಗಳಿದ್ರು.
ಇನ್ನು ಮೈತ್ರಿ ಸರ್ಕಾರ ‌ಅತಂತ್ರಗೊಳಿಸುವ ಉದ್ದೇಶ ಮೋದಿಗಿಲ್ಲ. ಲೋಕಸಭಾ ‌ಚುನಾವಣೆ ಬಳಿಕ ತಮ್ಮ ಭಾಷಣದಲ್ಲಿ ನರೇಂದ್ರ ‌ಮೋದಿ ಈ ಬಗ್ಗೆ ಹೇಳಿದ್ದಾರೆ. ಎಲ್ಲರೂ ಒಂದಾಗಿ ಕೆಲಸ ಮಾಡೋಣವೆಂದು ಕರೆ ನೀಡಿದ್ದಾರೆ. ರಾಜ್ಯದ ಮೈತ್ರಿ‌ ಸರ್ಕಾರ ಅತಂತ್ರಗೊಳಿಸುವ ಹುನ್ನಾರಕ್ಕೆ ಮೋದಿ ಕೈ ಹಾಕಿಲ್ಲ.‌‌ ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರಿಗೂ ಅವರು ಸೂಚನೆ ನೀಡಿಲ್ಲ ಎಂದು ಸಚಿವ ಜಿಟಿಡಿ ಅಭಿಪ್ರಾಯಪಟ್ಟರು.
ಮೈತ್ರಿ ಪಕ್ಷಗಳ ನಾಯಕರಾದ ಸಿಎಂ ಹೆಚ್​ಡಿಕೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ‌ಚುನಾವಣೆ ಮೊದಲೇ ಒಂದಾಗಿರಬೇಕಿತ್ತು. ಫಲಿತಾಂಶದ ಬಳಿಕ ಅವರ ನಿವಾಸಕ್ಕೆ ಇವರು, ಇವರ ನಿವಾಸಕ್ಕೆ ಅವರು ಹೋಗುತ್ತಿದ್ದಾರೆ. ಮೊದ್ಲೇ ಅವರು ಈ ರೀತಿ ಮಾಡಿದ್ದರೆ ಮೈತ್ರಿ ‌ಸರ್ಕಾರದ‌ ಬಗ್ಗೆ ರಾಜ್ಯದ ಜನರಲ್ಲಿ ಹೆಚ್ಚಿನ‌ ನಂಬಿಕೆ ಬರುತ್ತಿತ್ತು. ಹೆಚ್ಚಿನ ಸ್ಥಾನ ಗೆಲ್ಲಲು ಸಹಕಾರಿ ಆಗುತ್ತಿತ್ತು. ದೇವೇಗೌಡರಂತ ಹಿರಿಯರು ಸಂಸತ್​ನಲ್ಲಿ‌ ಇರಬೇಕು. ಅವರ ಸೋಲು ಬೇಸರ ತರಿಸಿದೆ‌ ಎಂದು ಸಚಿವರು ಹೇಳಿದ್ರು.