ತುಮಕೂರು: ಜಿಲ್ಲೆಯಲ್ಲಿರೋ ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ವನ್ಯಧಾಮ ರಾಜ್ಯದಲ್ಲಿಯೇ 2 ನೇ ವನ್ಯಧಾಮ ಎಂಬ ಹೆಗ್ಗಳಿಕೆ ಹೊಂದಿದೆ. ಹಾಗೆಯೇ ಇಲ್ಲಿ ರೈತರಿಗೆ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಕೃಷ್ಣ ಮೃಗಗಳು ಹೆಚ್ಚಿರುವುದು ಅರಣ್ಯ ಇಲಾಖೆಗೆ ಸಂತಸದ ವಿಷಯವಾದ್ರೆ, ಸ್ಥಳೀಯ ರೈತರಿಗೆ ಮಾತ್ರ ಈ ಕೃಷ್ಣಮೃಗಗಳು ದೊಡ್ಡ ಪೀಕಲಾಟ ತಂದಿಟ್ಟಿವೆ. ಪ್ರತಿ ವರ್ಷ ಅಪಾರ ಪ್ರಮಾಣದ ಬೆಳೆಯನ್ನು ಇವು ತಿಂದು ಹಾಕುತ್ತಿವೆ. ಇದರಿಂದ ರೈತರ ನೆರವಿಗೆ ಬರಲು ಮುಂದಾಗಿರುವ ಅರಣ್ಯ ಇಲಾಖೆ ಕೃಷಿ ಜಮೀನು ಖರೀದಿಸಲು ಮುಂದಾಗಿದೆ.
ನಿತ್ಯ ಹಿಂಡು ಹಿಂಡಾಗಿ ಬರುವ ಕೃಷ್ಣಮೃಗಗಳು ಚಿಗುರುವ ಹಂತದಲ್ಲಿರೋ ಬೆಳೆಯನ್ನು ತಿಂದು ಹಾಕುತ್ತಿವೆ. ಇದು ರೈತರಿಗೆ ಸಂಕಷ್ಟ ತಂದೊಡ್ಡುತ್ತಿದೆ. ಹೀಗಾಗಿ ಪ್ರತಿ ವರ್ಷ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ವಿತರಿಸಲಾಗುತ್ತಿದೆ. ರೈತರು ಕೂಡ ಪ್ರತಿ ಕೃಷ್ಣಮೃಗಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ 400-450 ಸಂಖ್ಯೆಯಲ್ಲಿ ಕೃಷ್ಣಮೃಗಗಳಿವೆ. 323 ಹೆಕ್ಟೇರ್ ಪ್ರದೇಶದಲ್ಲಿರುವ ಹುಲ್ಲುಗಾವಲಿನಲ್ಲಿ, ದಶಕಗಳಿಂದ ಈ ಭಾಗದಲ್ಲಿ ಕೃಷ್ಣಮೃಗಗಳ ಸಂತತಿ ಇದೆ. ಈ ಪ್ರದೇಶದಲ್ಲಿ ವಿಶಾಲವಾದ ಹುಲ್ಲುಗಾವಲಿದ್ದು, ಅಲ್ಲಲ್ಲಿ ಕುರುಚಲು ಗಿಡಗಳಿವೆ. ಹೀಗಾಗಿ ಬೇಟೆಗಾರರ ಕೈಗೆ ಸಿಕ್ಕಿ ಬೀಳದಂತೆ ತಪ್ಪಿಸಿಕೊಳ್ಳುವ ಮತ್ತು ಹುಲ್ಲುಗಾವಲಿನ ಪ್ರದೇಶವಾಗಿರೋದ್ರಿಂದ ಕೃಷ್ಣಮೃಗಗಳಿಗೆ ಇದು ಉತ್ತಮ ಆಶ್ರಯ ತಾಣವಾಗಿದೆ.
ಞಅರಣ್ಯಕ್ಕೆ ಹೊಂದಿಕೊಂಡ ಕೃಷಿ ಜಮೀನಿಗೆ ಮೇವಿಗಾಗಿ ಇವು ದಾಳಿ ಇಡುವುದು ಸಾಮಾನ್ಯವಾಗಿದೆ. ಹೀಗಾಗಿ ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿ ರೈತರು ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಮುಂದಾದ್ರೆ ಖರೀದಿಸಲು ಸಿದ್ಧವಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ರೈತರ ಈ ಜಮೀನುಗಳನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. 1,280 ಎಕರೆ ಕೃಷಿ ಪ್ರದೇಶವನ್ನು ವಶಕ್ಕೆ ಪಡೆಯಲು ರೈತರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಾಧಿಕಾರಿ ರಾಮಲಿಂಗೇಗೌಡ ಮಾಹಿತಿ ನೀಡಿದ್ದಾರೆ.
