ಗೌಡ ಫುಟ್ಬಾಲ್ ಟ್ರೋಫಿ ಪಂದ್ಯಾವಳಿ : ಮರಗೋಡಿನಲ್ಲಿ ಮೇ 11 ರಂದು ಚಾಲನೆ

No comments

 ಮಡಿಕೇರಿ ಮೇ 10 : ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ-೨೦೧೯ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೇ 11 ರಿಂದ 19ರವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ನಿರ್ದೇಶಕ ಚೆರಿಯಮನೆ ರಕ್ಷವ್ ಮಾತನಾಡಿ ಪಂದ್ಯಾವಳಿಯಲ್ಲಿ ಸುಮಾರು ೭೭ ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಗಳಿಗೆ ಕ್ರಮವಾಗಿ ೩೦ ಸಾವಿರ, ೨೦ ಸಾವಿರ, ೧೦ ಸಾವಿರ ಹಾಗೂ ೫ ಸಾವಿರ ರೂ.ಗಳ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ ಉತ್ತಮ ಆಟಗಾರ, ಅತ್ಯುತ್ತಮ ಗೋಲ್ ಕೀಪರ್, ಅತೀ ಹೆಚ್ಚಿನ ಗೋಲ್ ಸ್ಕೋರರ್, ಅತ್ಯುತ್ತಮ ಮಹಿಳಾ ಆಟಗಾರ್ತಿ, ಅತ್ಯುತ್ತಮ ತಂಡ, ಅತ್ಯುತ್ತಮ ರಕ್ಷಣಾ ಆಟಗಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದರು. ಆರಂಭಿಕ ದಿನದಂದು ಬೆಳಗ್ಗೆ ೯ ಗಂಟೆಗೆ ಹೊಸ್ಕೇರಿ ಗ್ರಾಮದ ಕಾಫಿ ಬವೆಳೆಗಾರ ಹಾಗೂ ನಿವೃತ್ತ ಶಿಕ್ಷಕ ಅಯ್ಯಂಡ್ರ ಪೂಣಚ್ಚ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಶ್ಯಂತ್ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಮರಗೋಡುವಿನ ವೈಷ್ಣವಿ ಫುಟ್ಬಾಲ್ ಕ್ಲಬ್ ಹಾಗೂ ಮಡಿಕೇರಿಯ ಮೀಡಿಯಾ ಫ್ರೆಂಡ್ಸ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಏರ್ಪಡಿಸಲಾಗಿದೆಯೆಂದು ಮಾಹಿತಿ ನೀಡಿದರು. ಮೇ೧೯ ರಂದು ಬೆಳಗ್ಗೆ ೯.೩೦ ಕ್ಕೆ ಮೊದಲ ಸೆಮಿಫೈನಲ್, ೧೦.೩೦ಕ್ಕೆ ೨ನೇ ಸೆಮಿಫೈನಲ್ ಹಾಗೂ ಅಪರಾಹ್ನ ೧.೩೦ಕ್ಕೆ ೩ ಮತ್ತು ೪ನೇ ಸ್ಥಾನಗಳಿಗೆ ಪಂದ್ಯಾಟ ನಡೆಯಲಿದೆ. ೨.೩೦ಕ್ಕೆ ನಡೆಯುವ ಫೈನಲ್ ಪಂದ್ಯಾಟವನ್ನು ಕಾವೇರಿ ಗ್ರೂಪ್ಸ್ ಮುಖ್ಯ ಕಾರ್ಯನಿರ್ವಾಹಕ ದೇಲಂಪಾಡಿ ಹೆಚ್. ಗಣೇಶ್ ಅವರು ಉದ್ಘಾಟಿಸಲಿದ್ದಾರೆ. ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಬೈಕ್ ಸ್ಟಂಟ್ ಹಾಗೂ ಮ್ಯಾಜಿಕ್ ಶೋವನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಶ್ಯಂತ್ ರಮೇಶ್, ನಿರ್ದೇಶಕರಾದ ಪಾಂಡನ ಹೃಷಿಕೇಶ್ ಹಾಗೂ ಚೆರಿಯಮನೆ ಚೇತನ್ ಉಪಸ್ಥಿತರಿದ್ದರು.

No comments

Post a Comment